ನಾಗೇಶ ಶಾಸ್ತ್ರಿ, ವೈ
	1893-1974. ಕನ್ನಡದ ನವೋದಯ ಕಾಲದ ಹಿರಿಯ ವಿದ್ವನ್ಮಣಿಗಳಲ್ಲಿ ಒಬ್ಬರು. ಬಳ್ಳಾರಿಯಿಂದ 25 ಕಿಮೀ. ದೂರದಲ್ಲಿರುವ ಏಳುಬೆಂಚೆ ಹಳ್ಳಿಯಲ್ಲಿ ವೀರಶೈವ ಜಂಗಮ ಮನೆತನದ ಬಡಕುಟುಂಬವೊಂದರಲ್ಲಿ ಹುಟ್ಟಿದರು. ಪ್ರಾಥಮಿಕ ಶಿಕ್ಷಣ ಮುಗಿದಬಳಿಕ ಇವರು ಕೆಲಕಾಲ ಉಪಾಧ್ಯಾಯರಾಗಿದ್ದರು. ಅನಂತರ ಅಂದಿನ ನಿಜಾಮ ಕರ್ನಾಟಕದ ಕೊಪ್ಪಳ ಗವಿಮಠದ ಕೊಂಗೋಡು ವೀರಭದ್ರಶಾಸ್ತ್ರಿಗಳ ಶಿಷ್ಯಂದಿರಾಗಿ ಮೂರು ವರ್ಷಗಳ ಕಾಲ ಸಂಸ್ಕøತ ಸಾಹಿತ್ಯದ ಅಧ್ಯಯನ ನಡೆಸಿದರು. ಇದು ಇವರ ಬದುಕಿಗೆ ದಾರಿ ತೋರಿತಲ್ಲದೆ ಸಾಹಿತ್ಯಕೃಷಿಗೆ ಪ್ರೇರಣೆಯನ್ನೊದಗಿಸಿ, ವಿದ್ವಜ್ಜೀವನಕ್ಕೆ ಬುನಾದಿಯನ್ನು ಹಾಕಿತು. 1914ರಲ್ಲಿ ಬಳ್ಳಾರಿಯ ವಾಡ್ರ್ಲಾ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾಗಿ ನಿಯಮಿಸಲ್ಪಟ್ಟರು. ಇವರು ಸ್ವಂತ ಶ್ರಮದಿಂದ ಸಂಪಾದಿಸಿದ ತೆಲುಗು-ಹಿಂದೀ ಭಾಷಾನೈಪುಣ್ಯ, ಇಂಗ್ಲಿಷ್ ಪರಿಚಯ ಇವರ ಕನ್ನಡ-ಸಂಸ್ಕøತ ಪಾಂಡಿತ್ಯಕ್ಕೆ ಹೆಚ್ಚಿನ ಮೆರುಗು ಕೊಟ್ಟಿತು.

	ಶಾಸ್ತ್ರಿಗಳು ತಮ್ಮ ಬದುಕಿನ ಬಹುಕಾಲವನ್ನು ಅಧ್ಯಯನ-ಅಧ್ಯಾಪನಗಳಲ್ಲಿ ಕಳೆದರು. 1925ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಸರ್ವದರ್ಶನತೀರ್ಥ ಪ್ರಶಸ್ತಿಯನ್ನೂ ಎರಡು ವರ್ಷಗಳ ಅನಂತರ ಮದರಾಸು ವಿಶ್ವವಿದ್ಯಾಲಯದ ಕನ್ನಡ-ಸಂಸ್ಕøತ ಪಂಡಿತ ಪ್ರಶಸ್ತಿಯನ್ನೂ ಇವರು ಪಡೆದರು. ಕನ್ನಡ ಅಧ್ಯಾಪಕರಾಗಿ ಇವರು ಮದನಪಲ್ಲಿಯ ತಿಯಾಸಫಿಕಲ್ ಕಾಲೇಜು, ಬೆಳಗಾಂವಿಯ ಲಿಂಗರಾಜ ಕಾಲೇಜು ಮತ್ತು ಬಳ್ಳಾರಿಯ ವೀರಶೈವ ಆಟ್ರ್ಸ್ ಕಾಲೇಜುಗಳಲ್ಲಿ ಅನುಕ್ರಮವಾಗಿ ಸೇವೆ ಸಲ್ಲಿಸಿದರು. ಇವರ ಪ್ರತಿಭೆ-ಪಾಂಡಿತ್ಯಗಳನ್ನು ಮೆಚ್ಚಿಕೊಂಡ ಸೊಂಡೂರು ಸಂಸ್ಥಾನಾಧೀಶರೂ ಮೈಸೂರಿನ ಮಹಾರಾಜರೂ ಇವರಿಗೆ ಆಸ್ಥಾನ ವಿದ್ವಾಂಸರೆಂಬ ಪ್ರತಿಷ್ಠೆಯ ಮನ್ನಣೆಯನ್ನು ನೀಡಿ ಗೌರವಿಸಿದರು. 1933ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ 19ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿ ಕನ್ನಡಿಗರೆಲ್ಲರ ಗೌರವಕ್ಕೆ ಇವರು ಪಾತ್ರರಾದರು.

	1925ರಲ್ಲಿ ಬಳ್ಳಾರಿಯಿಂದ ಕರ್ನಾಟಕ ಬಂಧುವೆಂಬ ಪತ್ರಿಕೆಯನ್ನು ಹೊರಡಿಸಿ ಕನ್ನಡ ಸಂಸ್ಕøತಿಯ ಪ್ರಸಾರಕರಾಗಿ, ತನ್ಮೂಲಕ ಕನ್ನಡಕ್ಕೂ ಪತ್ರಿಕಾಪ್ರಪಂಚಕ್ಕೂ ಇವರು ಸೇವೆ ಸಲ್ಲಿಸಿದರು.

	ಶಾಸ್ತ್ರಿಗಳು ಕನ್ನಡದ ಪ್ರಾಚೀನ ಪರಂಪರೆಯ ಪ್ರೌಢಕಾವ್ಯ ಸರಣಿ, ವೀರಶೈವ ಮತ-ಸಂಸ್ಕøತಿ, ಸಂಸ್ಕøತ ಸಾಹಿತ್ಯಗಳಿಗೆ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ. ಗವಿಸಿದ್ಧೇಶ್ವರ ಪುರಾಣ (1950), ಮರಿಯೋಗೀಶ್ವರ ಪುರಾಣದಂಥ ಪ್ರೌಢಕಾವ್ಯಗಳು ಹಾಗೂ ವಜ್ರಾಂಗುಳೀಯ (1916), ವಿಜಯನಗರಾಭ್ಯುದಯವೆಂಬ ನಾಟಕಗಳನ್ನು ಇವರು ರಚಿಸಿದರು. ಅಲ್ಲದೇ ಸಂಸ್ಕøತ ಸಾಹಿತ್ಯದ ಸವಿಯನ್ನು ಕನ್ನಡಿಗರಿಗೆ ನೀಡಲು ಕೈಗೊಂಡ ಕಾರ್ಯ ಹಿರಿದಾದುದು. ಕಾಳಿದಾಸನ ರಘುವಂಶವನ್ನು ಷಟ್ಪದಿಯಲ್ಲೂ ಕುಮಾರಸಂಭವವನ್ನು ಚಂಪೂವಿನಲ್ಲಿಯೂ ಭಗವದ್ಗೀತೆ, ಚಂದ್ರಾಲೋಕಗಳನ್ನು ಚಂಪೂರೂಪದಲ್ಲೂ ಇವರು ಅನುವಾದ ಮಾಡಿದರು. ಮಗ್ಗೆಯ ಮಾಯಿದೇವನ ಅನುಭವಸೂತ್ರದ ಗದ್ಯಾನುವಾದವನ್ನಿವರು ಕೊಟ್ಟಿದ್ದಾರೆ. ಇವರದು ಅಪೂರ್ವವಾದ ನಿರಾಡಂಬರದ ಬದುಕು. ಯಾವ ವಿಧವಾದ ಅಧಿಕಾರದ ಅಮಿಷ, ಕೀರ್ತಿಯ ಶನಿಗಳಿಗೆ ಬಲಿಯಾಗದೆ ಬಾಳಿದ ಹಿರಿಯ ಚೇತನ ಇವರದು.										
(ಎಂ.ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ